ಕನ್ಯಾಕುಮಾರಿ ಯಿಂದ ಹಿಡಿದು ಕಾಶ್ಮೀರದ ವರೆಗೆ ಹಬ್ಬಿರುವ ಸಾಮಾಜಿಕ ಮಾಧ್ಯಮದ ಜಾಲ ಸುದ್ದಿ ಹರಡಿದ್ದು ಹೀಗೆ .......

ಸ್ವಾತಿ,ನಾಲ್ಕನೇ ಸೆಮಿಸ್ಟರ್ ಇನ್ಫರ್ಮೇಷನ್ ಟೆಕ್ನಾಲಜಿ  ವಿಭಾಗದ ಇಂಜಿನಿಯರಿಂಗ್ ವಿದ್ಯಾರ್ಥಿನಿ. ಓದುತ್ತಿರುವುದು ರಾಜ್ಯದ ಪ್ರಸಿದ್ಧ ಕಾಲೇಜಿನಲ್ಲಿ . ತನ್ನ ಗುರುವಾರದ ಪರೀಕ್ಷೆಯ ಪತ್ರಿಕೆ  ಮುಗಿಸಿ ಸೋಮವಾರದ ಪರೀಕ್ಷೆಯ ತಯಾರಿಯಲ್ಲಿದ್ದಳು . ಮರುದಿನ ಶುಭ ಶುಕ್ರವಾರ ಬೆಳಗಾಗಿ ಅದಾಗಲೇ ನೇಸರ ಭರವಸೆಯ ಮುಂಜಾನೆಯನ್ನು ಇಳೆಗೆ ನೆನಪಿಸಿದ್ದ . ಎಂದಿನಂತೆ ದಿನಪತ್ರಿಕೆ ತಡವಾಗಿಯೇ ಬಂದಿತು. ಆದರೆ ಅದನ್ನು ಓದಲು ಕುಳಿತ ಸ್ವಾತಿ ತನ್ನ ನೆಚ್ಚಿನ ವಿಶ್ವವಿದ್ಯಾಲಯ ನೆಡೆಸಿದ ಎರಡನೇ ಸೆಮಿಸ್ಟರ್ ನ ಪೂರಕ ಗಣಿತ ಪ್ರಶ್ನೆ ಪತ್ರಿಕೆಯು ವಾಟ್ಸ್ಆಪ್ ನಲ್ಲಿಪರೀಕ್ಷೆಗೂ ಒಂದು ಗಂಟೆಗೂ ಮೊದಲೇ ಸೋರಿಕೆ ಯಾಗಿದೆ . ಎನ್ನುವ ಸುದ್ದಿ ಓದಿ ತಡವರಿಸಿದಳು . ಸೋರಿಕೆ ಯಾಗಿದ್ದು ಎರಡನೇ ಸೆಮಿಸ್ಟರ್ ಪತ್ರಿಕೆ. ಸ್ವಾತಿಗೆ ಯಾವ ಆತಂಕ ಪಡುವ ಅವಶ್ಯಕತೆ ಇಲ್ಲವಾದರೂ ಸಾಮಾಜಿಕ ಮಾಧ್ಯಮದ ಸದ್ಭಳಕೆ ಯ ಬಗ್ಗೆ ಸೆಮಿನಾರ್ ಒಂದನ್ನು ಕೊಟ್ಟು ಪ್ರಶಂಸೆ ಪಡೆದ ಸ್ವಾತಿ ತನ್ನ ಪಠ್ಯದ ಬಗೆಗಿನ ಅನುಮಾನಗಳನ್ನು ಮನ್ವಿತಾ ಮೇಡಮ್ ಹತ್ತಿರ ಅದೇ ವಾಟ್ಸ್ ಆಪ್ ನಲ್ಲಿ ಬಗೆಹರಿಸಿಕೊಳ್ಳುತ್ತಿದ್ದೂ ಉಂಟು. ಆದರೆ ಪ್ರಶ್ನೆ ಪತ್ರಿಕೆ ಸೋರಿಕೆಯ ವಿಷಯ ಮಾತ್ರ ಅವಳ ಮನ ಕಲಕಿ ಆತಂಕದ ಅಲೆಯನ್ನೇ ಸೃಷ್ಟಿಸಿತ್ತು . ಕಾರಣ ,ಸೆಮಿಸ್ಟರ್ ಪರೀಕ್ಷೆ ಗಳ  ಪ್ರಾರಂಭಕ್ಕೂ ಮುಂಚೆಯೇ ವಾಟ್ಸ್ ಆಪ್ ನಲ್ಲಿ ಹರಿಯಬಿಡಲಾದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ  (ವಿ ಟಿ ಯು) ಪರೀಕ್ಷೆಯು  ಮುಂದೂಡಲ್ಪಟ್ಟಿದೆ ಎಂಬ ನಕಲಿ ಸುದ್ದಿಗೆ ವಿಶ್ವವಿದ್ಯಾನಿಲಯದ ಪರೀಕ್ಷಾ ವಿಭಾಗದ ಮುಖ್ಯಸ್ಥರು ಈ ಸುದ್ದಿಯು ದೋಷಪೂರಿತವೂ ,ನಕಲಿಯೂ ಆಗಿದ್ದು ಪರೀಕ್ಷೆಗಳು ವೇಳಾಪಟ್ಟಿಯಲ್ಲಿರುವಂತೆಯೇ ನೆಡೆಯುತ್ತವೆ ವಿದ್ಯಾರ್ಥಿಗಳು ಆತಂಕಪಡುವ ಅವಶ್ಯಕತೆಯಿಲ್ಲ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಿ ಹಾಗು ಗಾಳಿ ಸುದ್ದಿಗೆ ಕಿವಿಗೊಡಬೇಡಿ ಎಂದು ಸೃಷ್ಠಿ ಕರಣ ಕೊಟ್ಟಾಗಿತ್ತು .
ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ವಿಶ್ವದರ್ಜೆಯ ಜ್ಞಾನ ವನ್ನು ತಲುಪಿಸುವ ,ಸಂಶೋಧನೆಯ ಹರಹು ಮತ್ತು ತ್ರಜ್ಞಾನದಲ್ಲಿ ನಾಯಕತ್ವ ಹಾಗೂ ನಾವೀನ್ಯತೆ ಯ ಕೊಡುಗೆಯನ್ನು ಕೈಗಾರಿಕೆ ಮತ್ತು ಸಮಾಜಕ್ಕೆ ಕೊಟ್ಟು ದೇಶದಲ್ಲಿಯೇ ಅತ್ಯುತ್ತಮ ವಿಶ್ವವಿದ್ಯಾಲಯ ವಾಗಬೇಕೆಂಬ ದೂರದೃಷ್ಟಿ ಹೊಂದಿರುವ ಶ್ರೇಷ್ಠ ಭಾರತೀಯ ಇಂಜಿನಿಯರ್ ,ವಿದ್ವಾಂಸ ,ಮುತ್ಸದ್ದಿ ದೇಶದಲ್ಲೇ ಅತ್ಯುತ್ತಮ ಗೌರವವಾದ  ಭಾರತ ರತ್ನ ಪಡೆದ ಸರ್ ಎಂ ವಿಶ್ವೇಶ್ವರಯ್ಯ ನವರ ಹೆಸರಿನಲ್ಲಿ ಸ್ಥಾಪಿಸಲಾದ ಸಂಸ್ಥೆ ವಿ. ಟಿ. ಯು.
ಪರೀಕ್ಷಾ ಪದ್ದತಿಯಲ್ಲಿ ಡಿಜಿಟಲ್ ಮೌಲ್ಯಮಾಪನ ವ್ಯೆವಸ್ಥೆಯನ್ನು ೨೦೧೧-೧೨ ರಲ್ಲೇ ದೇಶದಲ್ಲೇ ಮೊದಲ ಬಾರಿಗೆ ಪರೀಕ್ಷಾ ಸುಧಾರಣಾ ಕ್ರಮಗಳನ್ನು ಅಳವಡಿಸಿ ತಂತ್ರಜ್ಞಾನದ ಸದ್ಬಳಕೆಯ  ನಾವೀನ್ಯ ಹೆಜ್ಜೆಯನ್ನಿರಿಸಿ ಯಶಸ್ವಿಯಾದ ಕೀರ್ತಿ ಕರ್ನಾಟಕ ಸರ್ಕಾರದ ಯೋಜನಾಬದ್ಧ ಹಾಗು ತಾಂತ್ರಿಕ ಶಿಕ್ಷಣದ  ಸಮರ್ಥ ಅಭಿರುದ್ಧಿಯ ಜೊತೆಗೆ ರಾಜ್ಯ ಮತ್ತು ರಾಷ್ಟ್ರದ ಸ್ಥಿರ ನೀತಿಗಳ ಪರಿವರ್ತಕ ವಿ ಟಿ ಯು ಸಂಸ್ಥೆಯದ್ದು .
ವಿಶ್ವ ವಿದ್ಯಾಲಯವೇನೋ ಪರೀಕ್ಷಾ ಪದ್ಧತಿಯಲ್ಲಿ ಸುಧಾರಣೆ ತಂದಿದೆ. ಆದರೆ ಅದರ ಲಾಭ ಪಡೆಯಬೇಕಾದ್ದು ವೃತ್ತಿ ನೈತಿಕತೆ ಹೊಂದಿರುವ ,ಯಶಸ್ವಿಯಾಗಿ ಕೌಶಲ್ಯ ಭರಿತ ಪದವಿ ಪಡೆದು ಭಾರತೀಯ ಸಮಾಜಕ್ಕೆ ತಮ್ಮ ಕೈಲಾದಷ್ಟು ಸಹಾಯ ಮಾಡುವ ಪ್ರಜ್ಞಾವಂತ ಭಾವಿ ಇಂಜಿನಿಯರ್ ಗಳ ಕೆಲಸವಲ್ಲವೇ ?
ಬಹುತೇಕ ಇಂಜಿನಿಯರ್ ಗಳು ಸರ್ಕಾರಿ ಸೀಟು ತಗೆದುಕೊಂಡು ಇನ್ನು ಕೆಲವರು ವಿದ್ಯಾರ್ಥಿ ವೇತನ , ಶುಲ್ಕ ಹಿಂಪಡೆತ ಹೀಗೆ ಒಂದಿಲ್ಲೊಂದು ರೀತಿಯಲ್ಲಿ ಸರ್ಕಾರದ ಬೊಕ್ಕಸ ದಿಂದ ಭರಿಸುವ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಹಳ್ಳಿಯ ರೈತನಿಂದ ಹಿಡಿದು ದಿಲ್ಲಿಯ ಸರ್ಕಾರದ ಮುಖ್ಯಸ್ಥರವರೆಗೂ ಕಟ್ಟುವ ತೆರಿಗೆ ಹಣ ದಿಂದ ಎನ್ನುವುದನ್ನು ಮರೆಯಬಾರದು .
ಇದೇನು ಬರಿ ಪರೀಕ್ಷಾ ಪತ್ರಿಕೆ ಸೋರಿಕೆಯ ಕಾರಣಮಾತ್ರದಿಂದಲೇ ಸಾಮಾಜಿಕ ಮಾಧ್ಯಮವನ್ನು ವಿರೋಧಾಭಾಸದಿಂದ ನೋಡುವುದು ಸರಿಯಲ್ಲವಾದ್ದರಿಂದ ನಿಮಗೆ ಆಯ್ದ ಕೆಲವು ನಿಧರ್ಶನಗಳನ್ನು ಕೊಡಬೇಕೆಂದೆನಿಸುತ್ತಿದೆ . ಸಹೃದಯೀ ಓದುಗರು ಸಾಮಾಜಿಕ ಮಾಧ್ಯಮದ  ದುರ್ಬಳಕೆ  ತೃಣ ಮಾತ್ರ ವೆಂದು ಅನ್ಯತಾ ಭಾವಿಸದೆ ಅದರ ಬಳಕೆ ಹೇಗಾಗುತ್ತದೆ ಎಂದು ವಿಮಶಿಸಬೇಕಾಗುತ್ತದೆ . ಉದಾಹರಣೆಗೆ , ವಾಟ್ಸ್ಆಪ್ ನಲ್ಲಿ ಟಿಪ್ಪುವಿನ ಪಾದಕಮಲಗಳಿಗೆ ಹನುಮಂತ ದೇವರು ನಮಸ್ಕರಿಸುವ ಚಿತ್ರವೊಂದನ್ನು ತನ್ನ ಪ್ರೊಫೈಲ್ ಸ್ಟೇಟಸ್ ನಲ್ಲಿ ಹಾಕಿಕೊಂಡಿದ್ದ ನರಸಿಂಹರಾಜಪುರದ ಮೇದಾರ ಬೀದಿ ನಿವಾಸಿ ಫಯಾಜ್ ನನ್ನು ಹಿಂದೂ ಯುವಕರ ಆಕ್ಷೇಪ ದ ಹಿನ್ನಲೆಯಲ್ಲಿಪೊಲೀಸರು ವಶಕ್ಕೆ ತಗೆದುಕೊಂಡಿದ್ದಾರೆ.ಈ ಮಾಹಿತಿಯನ್ನು ವಿಮರ್ಶಿಸಲು ಬಹುದೊಡ್ಡ ಜ್ಞಾನಸಂಪತ್ತೇನು ಬೇಕಾಗಿಲ್ಲ ಸಾಮಾನ್ಯ ವ್ಯವಹಾರ ಜ್ಞಾನ ವಿದ್ದರೆ ಸಾಕು . 
ಪ್ರೊಫೈಲ್ ಪಿಕ್ ಅನ್ನು ಹಾಕುವ ಮೊದಲೇ ಅದನ್ನು ಕಲ್ಪಿಸಿಕೊಳ್ಳಬೇಕಾಗುತ್ತದೆ ನಂತರ ಅದರ ರಚನೆ ಅದಕ್ಕೆ ಕಂಪ್ಯೂಟರ್ ತಂತ್ರಜ್ಞಾನದ ದುರ್ "ಬಳಕೆ " ಮಾಡಲೇ ಬೇಕು. ನಂತರದ ಸರದಿ ಸಾಮಾಜಿಕ ಮಾಧ್ಯಮದ್ದು . ಹೀಗೆ ಕಲ್ಪನೆ ,ಕರ್ತೃ ,ಕರ್ಮ ,ಕ್ರಿಯೆ ನೆಡೆದುದರ ಪ್ರತಿಫಲ ಮಾತ್ರ ಸದಾ ಶಾಂತಿ ,ಸಹಬಾಳ್ವೆ ,ಸೌಹಾರ್ದತೆಯಿಂದಿರಬೇಕು ಎಂದು ಕ್ಷಣಕ್ಷಣಕ್ಕೂ ಕಾತರಿಸುವ ಭವ್ಯ ಸಮಾಜದ ಶಾಂತಿ ಕದಡಿ ಧರ್ಮದ ಬ್ರಾಂಥಿಯಿಂದುಂಟಾದ ಕ್ರಾಂತಿ . ಸಾರ್ವಜನಿಕರ ಪಿತ್ತ ನೆತ್ತಿಗೇರಿ ಊರು ರಣರಂಗವಾದರೂ  ಆಶ್ಚರ್ಯವೇನಿಲ್ಲ. ಕಾರಣ ದೇಶದ ಬಗ್ಗೆ ಪರಿಕಲ್ಪನೆಯೇ ಇಲ್ಲದ ೧೭೯೦ ನೇ ಇಸವಿಯದು. ಉದಾಹರಣೆಗೆ, ಔದ್ ನ ಭಾರತೀಯ  ಬ್ರಿಟಿಷ್ ಸೈನಿಕ ತಾನು ಕೊಲ್ಲುತ್ತಿರುವುದು  ತನ್ನದೇ ದೇಶದ ಮತ್ತೊಂದು ರಾಜ್ಯದ ಭಾರತೀಯ ಸೈನಿಕನನ್ನು ಎಂಬ ಕನಿಷ್ಠ ದೇಶಾಭಿಮಾನ ಇಲ್ಲದೆ ಬರಿಯ ಸಂಬಳ ಕೊಟ್ಟಾತ ಪ್ರಭು , ಉಪ್ಪುತಿಂದ ಮನೆಗೆ ದ್ರೋಹ ಬಗೆವುದಾದರೂ ಉಂಟೆ ? ಎನ್ನುವ ಆರ್ಥಿಕಾಭಿಮಾನದ ಕಾಲವದು .ಅಂತಹ ಕಾಲದಲ್ಲಿನ ಟಿಪ್ಪುವನ್ನು ದೇಶದ್ರೋಹಿ ಎಂಬ ಹಣೆಪಟ್ಟಿ ಕಟ್ಟಿ ಹೊಸ ಇತಿಹಾಸ ನಿರ್ಮಿಸುವ ಸಾಹಸ ಮಾಡಿದ  ಸಾಮಾಜಿಕ ಮಾಧ್ಯಮವನ್ನು  ಸಮಾಜ ಮರೆಯುವುದಿಲ್ಲ .ಫ್ರೆಂಚ್ ಕ್ರಾಂತಿಯ ಕೂಸು ನೆಪೋಲಿಯನ್ ನನ್ನು ಸದೆಬಡಿದ ಸಹೋದರ ಆರ್ಥರ್ ವೆಲ್ಲೆಸ್ಲೆ ಯನ್ನು ಆಗಿನ ಗೌರ್ನರ್ ಜನರಲ್ ಲಾರ್ಡ್ ವೆಲ್ಲೆಸ್ಲೆ ಯು ಮರಾಠರ  ಮತ್ತು ಹೈದರಾಬಾದ್ ನ ನಿಜಾಮನ ಸಹಾಯವಿದ್ದರೂ ಟಿಪ್ಪುವನ್ನು ಮಣಿಸಲು ಭಾರತಕ್ಕೆ ಆಹ್ವಾನಿಸಿದ್ದು,  ಬ್ರಿಟಿಷರನ್ನು ಭಾರತದಿಂದಲೇ ಹೊರದೂಡುವ ಅಚಲ ಪ್ರಯತ್ನ ,ಸೈನ್ಯಕ್ಕೆ ಫ್ರೆಂಚ್ ಮಾದರಿಯ ಯುದ್ಧಕೌಶ್ಯಲ್ಯ ,ಸೈನಿಕರಲ್ಲಿ ಶಿಸ್ತು, ಯುದ್ಧದಲ್ಲಿ ಮೊದಲ ಬಾರಿಗೆ ಮೈಸೂರಿನ ರಾಕೆಟ್ ಗಳ ಉಪಯೋಗ ಹಾಗೂ ತಂತ್ರಜ್ಞಾನ ಬಳಕೆಯ ಅಗತ್ಯತೆಯ ಅರಿವು ಇದ್ದ ಟಿಪ್ಪುವಿನ ಧೈರ್ಯವೇ ಕಾರಣ.   
ಇತಿಹಾಸದ ನೈಜತೆಯನ್ನು ಮರೆತು ನಕಲಿ ಮಾಹಿತಿಯ ಪ್ರಸಾರದಲ್ಲಿ ಸಕ್ರಿಯವಾಗಿ ಭಾಗವಹಿಸುವ ಸಾಮಾಜಿಕ ಮಾಧ್ಯಮವು , ಹಳೆ ಶಿಲಾಯುಗದಿಂದ ಹಿಡಿದು ಆಧುನಿಕ ಭವ್ಯ ಭಾರತೀಯ ನೈಜ ಇತಿಹಾಸವನ್ನು ಪಸರಿಸುವ ಕೆಲಸವನ್ನು ಮಾಡುವ ಹೊಣೆಗಾರಿಕೆಯನ್ನೂ ಹೊರಬೇಕು ಎಂದು ಸಮಾಜ ಆಶಿಸುತ್ತದೆ .
ಒಮ್ಮೊಮ್ಮೆ ಸಾಮಾಜಿಕ ಮಾಧ್ಯಮವು ಪೊಲೀಸರನ್ನು ಪೇಚಿಗೆ ಸಿಲುಕಿಸಿ ಅವರ ತಾಳ್ಮೆಯನ್ನೂ ಪರೀಕ್ಷಿಸುವುದುಂಟು . 
ಮೊನ್ನೆ ತಮಿಳು ನಾಡಿನ ,ಮಲ್ಲೂರ ಪೊಲೀಸರು ಗುರುತಿಸಲಾಗದ ವ್ಯೆಕ್ತಿಯ ಹುಡುಕಾಟದಲ್ಲಿದ್ದರು  ,ಕಾರಣ ಸೇಲಂ - ಚನ್ನೈ ಹಸಿರು ಕಾರಿಡಾರ್ ಯೋಜನೆಯ ವಿರುದ್ಧ ಜನರ ಆಕ್ಷೇಪಕ್ಕೆ ಪೋಲೀಸರ ಕ್ರಮವನ್ನು ಕುರಿತು ಮಾಡಲಾದ ಹಳೆಯ ವಿಡಿಯೋ ಒಂದನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ನಕಲಿ ಸಂದೇಶ ಅದೆಂದರೆ "ಪೋಲೀಸರ ಗುಂಡಿನದಾಳಿಗೆ ವ್ಯಕ್ತಿಯ ಬಲಿ ". 
ಮಲ್ಲೂರು ಪೊಲೀಸರು ಆ ಕಿಡಿಗೇಡಿಯ ಮೇಲೆ ಕೇಸೊಂದನ್ನ ಜಡಿದು ದಸ್ತಗಿರಿ ಮಾಡಲು ಮುಂದಾದರು . ಜಿಲ್ಲಾ ವರಿಷ್ಠಾಧಿಕಾರಿ ಯು ಸಾಮಾಜಿಕ ಜಾಲತಾಣಗಲ್ಲಿ ತಪ್ಪು ಸಂದೇಶ ಹರಿಯಬಿಟ್ಟು ಜನರಲ್ಲಿ ಆತಂಕ ಸೃಷ್ಟಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುವುದಾಗಿ ಹೆಚ್ಚರಿಸಿದ್ದರು . 
ಸಾಮಾಜಿಕ ಮಾಧ್ಯಮವು ಭಾರತದಲ್ಲಿ  ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ತನ್ನ ಜಾಲವನ್ನು ಹೆಣೆದಿರುವುದು ಸಮಾಜ ಕಟ್ಟುವ ಕೆಲಸದಲ್ಲಿಇದು ವೈವಿಧ್ಯಮಯ ಭಾರತದ ಹೆಮ್ಮೆಯ ವಿಷಯ ಎಂದುಕೊಳ್ಳುವಷ್ಟರಲ್ಲೇ 
ಜಮ್ಮು ಮತ್ತು ಕಾಶ್ಮೀರ ದಲ್ಲಿ ಜರುಗುವ ಉಗ್ರಗಾಮಿತ್ವ ಹಿಂಸೆಯ ಬಗೆಗೆ ಮಾಡಿದ ಸಂಶೋಧನೆಯೊಂದರಲ್ಲಿ ಬಟಾ - ಬಯಲಾದ ಹಾಗೂ  ನುಂಗಲಾರದ ಸತ್ಯ ವೆಂದರೆ ಯುವಕರು ಉಗ್ರಗಾಮಿ ಗಳಾಗಿ ಬದಲಾಗಲು ಪ್ರಚೋದಿಸುವವರು ನೆಂಟರು , ನೆರೆಹೊರೆಯವರು ಕಾರಣ, ಮಾತ್ರವಲ್ಲದೆ ಕೇವಲ ಶೇಕಡಾ ಎರಡರಷ್ಟು (೨%) ಮಾತ್ರ ಯುವಕರು ಮದರಸಾ ಗಳಲ್ಲಿ ಕಲಿತವರಾಗಿದ್ದರೆ . ಇದಲ್ಲದೆ ಭೌಗೋಳಿಕಾಂಶ ,ಗೆಳೆಯರೆಡೆಗಿನ ಒಡನಾಟ ,ಸಾಮಾಜಿಕ ಮಾಧ್ಯಮ ,ಕುಟುಂಬ ಮತ್ತು ನೆರೆಹೊರೆಯವರು ಇವೆ ಮೊದಲಾದ ಸ್ಥಳೀಯ ಅಂಶಗಳು ಇಪ್ಪತ್ತರ ಹರೆಯದ ಯುವಕರನ್ನು ಉಗ್ರಗಾಮಿತ್ವಕ್ಕೆ ಪ್ರಚೋದಿಸುತ್ತಿವೆ. 
ಸಂಶೋಧನಾ ವರದಿಯು ಕಾಶ್ಮೀರದಲ್ಲಿ  ಯುವಕರನ್ನು ಉಗ್ರಗಾಮಿತ್ವಕ್ಕೆ ಪ್ರಚೋದಿಸುವ ಕಾರ್ಯದಲ್ಲಿ  ಇಸ್ಲಾಮಿಕ್ ಸ್ಟೇಟ್ (ಐ ಎಸ್ ) ಅಥವಾ ಧಾರ್ಮಿಕ ಸಿದ್ಧಾಂತ ಗಳಿಗಿಂತ ಗೆಳೆಯರು ಮತ್ತು ಸಾಮಾಜಿಕ ಮಾಧ್ಯಮ ಗಳೇ ನಿರ್ಣಾಯಕ ಪಾತ್ರ ವಹಿಸಿವೆ ಎಂದು ಸೂಚಿಸಿದೆ. 
ಸಾಮಾಜಿಕ ಮಾಧ್ಯಮ ದ ಬಳಕೆಯ ದುರಂತ ವೆಂದರೆ ನೂರಾರು ಕಾಲ ಬಾಳಿ ಬದುಕಬೇಕಾದ ಸಾರ್ವಜನಿಕರನ್ನು ಸಾಮಾಜಿಕ ಜಾಲದಲ್ಲೇ ದೈವಾಧೀನ ರನ್ನಾಗಿಸಿ ಅವರ ಆತ್ಮಕ್ಕೆ ಚಿರಶಾಂತಿಯನ್ನೂ ಕೋರುವುದು . ಉದಾಹರಣೆಗೆ, ಸಾಲುಮರದ ತಿಮ್ಮಕ್ಕ ಇನ್ನಿಲ್ಲ ಎಂಬ ಸುಳ್ಳು ಸುದ್ದಿಯನ್ನು ಸಾಮಾಜಿಕ ಮಾಧ್ಯಮಗಲ್ಲಿ ಹರಡಿ ಕೊನೆಗೆ ತಿಮ್ಮಕ್ಕನ ಕುಟುಂಬ ಈ ಸುಳ್ಳು ಸುದ್ದಿಯ ವಿರುದ್ಧ ಪೊಲೀಸ್ ಠಾಣಾ  ಮೆಟ್ಟಿಲೇರುವ ಮುಂಚೆಯೇ ಸಾವಿರಾರು ವಾಟ್ಸಪ್ಪಿಗಳು ,ಫೇಸ್ ಬುಕ್ಕಿಗಳು ,ಟ್ವಿಟ್ಟಿಗಳು ರಿಪ್ (ರೆಸ್ಟ್ ಇನ್ ಪೀಸ್ ) ಅನ್ನು ಟೈಪ್ ಮಾಡಿ ಇನ್ನೂ ಸಾಯದ ,ಶತಾಯುಷಿ ಯಾಗಿ ಬಾಳಿ ಬದುಕಬೇಕಾದ ತಿಮ್ಮಕ್ಕನಿಗೆ, 
ಅಕ್ಕ ಹೇಗಿದ್ದಳೋ ?ಸಾವಿಗೆ ಕಾರಣವಾದರು ಏನು ? ಇವೆಲ್ಲವನ್ನು  ಯೋಚಿಸಲು ಸಮಯವಿಲ್ಲದೆ, ಸಾವಿನ ಕಾರಣ ತಿಳಿಯುವ ಕನಿಷ್ಠ ಸೌಜನ್ಯವನ್ನೂ ತೋರದೆಯೇ  "ಪರಿಸರವಾದಿ ತಿಮ್ಮಕ್ಕ ಇನ್ನಿಲ್ಲ " ಎನ್ನುವ ಶೀರ್ಷಿಕೆ ಕೊಟ್ಟು  ಚಿರಶಾಂತಿ ಕೋರಿದ್ದರು . 
ಮರಗಳನ್ನು ತನ್ನ ಮಕ್ಕಳಂತೆ ಪೋಷಿಸಿದ ತಿಮ್ಮಕ್ಕನಿಗೆ ಕನ್ನಡ ನಾಡಿನ ಕೆಲ ಮಕ್ಕಳು ತಾಯಿಯ ಋಣ ತೀರಿಸಿದ ಬಗೆ ಇದು . 
ಭಾರತ ಮಾತೆಯ  ಸಪ್ತ ತಂಗಿಯರೆಂದು ಕರೆಯುವ ಈಶಾನ್ಯ ರಾಜ್ಯಗಳನ್ನೂ ತನ್ನ ಜಾಲದಲ್ಲಿ ಹೆಣೆದು ಪರಿತಪಿಸುವಂತೆ ಮಾಡಿದ ಸಾಮಾಜಿಕ ಮಾಧ್ಯಮ :ಮೇಘಾಲಯದ ಶಿಲಾಂಗ್ ನಲ್ಲಿ ಗುರುವಾರ ಸಂಜೆ ಸೂರ್ಯದೇವರು ತನ್ನ ಕೆಲಸವನ್ನು ಮುಗಿಸಿ ನೆಮ್ಮದಿಯ ನಾಳೆಯ ಭರವಸೆ ಮೂಡಿಸಿ ಮುಳುಗುವ ಸಮಯ, ಸಾಮಾಜಿಕ ಮಾಧ್ಯಮ ಗಳಲ್ಲಿ ಹರಿಯಬಿಟ್ಟ  ಬುಡಕಟ್ಟು ಜನಾಂಗದ ವ್ಯೆಕ್ತಿ ಸಾವು ಎನ್ನುವ ವದಂತಿ ಕಾಡ್ಗಿಚ್ಚಿನಂತೆ ಹಬ್ಬಿ ಜನಾಂಗೀಯ ಘರ್ಷಣೆಯುಂಟಾಗಿ ಕರ್ಫ್ಯೂ ಜಾರಿಗೆ ಬಂದಿತು . ಇದಕ್ಕೆ ಅಂತದ್ದೇನು ಅಹಿತಕರ ಘಟನೆ ,ರಕ್ತಪಾತವೇನೂ ಮೊದಲಿಗೆ ಜರುಗಲಿಲ್ಲ ಬದಲಿಗೆ ಒಂದು ವಾರದ ವರೆಗೆ ಹಿಂಸಾತ್ಮಕ ಹಂತ ತಲುಪಿದ್ದು ಮಾತ್ರ ಕ್ಷುಲ್ಲಕ ಕಾರಣಕ್ಕೆ : ಸ್ಥಳೀಯ ನಿವಾಸಿ ಮಹಿಳೆ ಯೊಬ್ಬಳು ನೀರು ಸಂಗ್ರಹ ಮಾಡಲು ಅಡಚಣೆ, ಅದಕ್ಕೆಕಾರಣ ಬುಡಕಟ್ಟು ವ್ಯೆಕ್ತಿ ದಾರಿಗೆ ಅಡ್ಡಲಾಗಿ ನಿಲ್ಲಿಸಿದ್ದ ಬಸ್. ಹೀಗೆ ಪ್ರತ್ಯಾರೋಪವು ಬುಡಕಟ್ಟು ಮತ್ತು ದಲಿತರ ನಡುವಿನ  ಜಗಳಕ್ಕೆ ತಿರುಗಿತು . ಇನ್ನೂ ಮುಂದುವರೆದು ಬುಡಕಟ್ಟು ವ್ಯೆಕ್ತಿಯು ಮೃತಪಟ್ಟ ಎನ್ನುವ ವದಂತಿಯು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರವಾಹದಂತೆ ಹರಿದು ಜನಾಂಗೀಯ ಗಲಭೆಯಾಗಿ ಮಾರ್ಪಟ್ಟು ತಂಪಾದ ಈಶಾನ್ಯ ರಾಜ್ಯದಲ್ಲಿ ಕರ್ಫ್ಯೂ ವಿನ ಬಿಸಿ ಮುಟ್ಟಿಸಿತು . ತತ್ ಕ್ಷಣದ ಪರಿಣಾಮವೆಂದರೆ ಸುದ್ದಿ ಹರಡಿದ ಮೊದಲ ದಿನವೇ ಒಬ್ಬ ಪತ್ರಕರ್ತ ಮತ್ತು ನಾಲ್ವರು ಸಾರ್ವಜನಿಕರು ಗಾಯಗೊಂಡರು . ಗಲಭೆ ಯ ಕಿಡಿ ಹಚ್ಚಿದ್ದು ಸಾಮಾಜಿಕ ಮಾಧ್ಯಮ ಆದರೆ ನಂದಿಸುವ ಕೆಲಸ ಮಾಡಿದ್ದು  ಕರ್ಫ್ಯೂ ಮಾತ್ರ.  
ಕರ್ಫ್ಯೂ ಸಂದರ್ಭದಲ್ಲಿ ಪೋಲೀಸರದು ದರ್ಬಾರು,ಹಿಂಸೆ ಕರ್ಫ್ಯೂ ಗೆ ಒಳಪಟ್ಟ ಸ್ಥಳ ಪೊಲೀಸರ ಮುಲಾಜಿನಲ್ಲೇ ಇರುತ್ತದೆ ಎನ್ನುವ ಸಾರ್ವಜನಿಕರು ಸಾಮಾಜಿಕ ಮಾಧ್ಯಮಗಳನ್ನು ಕಿಡಿಗೇಡಿ ಕೆಲಸಗಳಿಗೆ ಬಳಸಿ ಸಮಾಜದಲ್ಲಿ ಸಹಬಾಳ್ವೆ ಕದಡಿ ಹಿಂಸೆಯ ಸುನಾಮಿಯನ್ನೇ ಸೃಷ್ಟಿಸುವವರದು ಏನೆಂದು ಉತ್ತರಿಸಬೇಕಿದೆ .  
ಮೇಲಿನ ಎಲ್ಲಾ ಆಯ್ದ ಕೆಲ ಘಟನೆಗಳು ಜರುಗಿರುವುದು ೨೦೧೮ ನೇ ಇಸವಿ ಮೇ ೨೭ ರಿಂದ ಜೂನ್ ೨೫ ರವರೆಗೆ ಅಂದಾಜು ೩೦ ದಿನಗಳಲ್ಲಿ ಇಷ್ಟು ಅವಾಂತರ ಸೃಷ್ಟಿಸುವ ಸಾಮಾಜಿಕ ಮಾಧ್ಯಮಗಳು ಇನ್ನುಳಿದ ೩೩೩ ದಿನಗಳಲ್ಲಿ ಇನ್ನೆಷ್ಟು ನಿರ್ಣಾಯಕ ಪಾತ್ರ ವಹಿಸುವವೋ ದೇವರೇ ಬಲ್ಲ . 
ಹಾಗಾದರೆ ಸಾಮಾಜಿಕ ಮಾಧ್ಯಮವನ್ನೇ ನೇರ ಹೊಣೆಯನ್ನಾಗಿ ಮಾಡಬೇಕೆ ? ಎಂದರೆ ಅದು ಅಕ್ಷರ ಶಹ ಇಲ್ಲ , ಆದರೆ ಅದನ್ನು ಬಳಸುವವರು ಅದರ ನೈತಿಕ ಹೊಣೆ ಹೊರಲೇ ಬೇಕಾಗುತ್ತದೆ.  ಯಾವುದೇ ಮಾದ್ಯಮವಿರಬಹುದು ಅದರಿಂದ ಮಾಹಿತಿ ಪಡೆದು ಹಂಚಿಕೆ ಮಾಡಿ ಅದರ ಲಾಭವನ್ನು ಸಮಾಜದ ಪ್ರತಿಯೊಬ್ಬರೂ ಪಡೆಯ ಬೇಕು. ಸಮಾಜ ಬಯಸುವುದೂ ಇದನ್ನೆ ಅದಕ್ಕೊಂದು ಉದಾಹರಣೆ ಕೊಡಬೇಕೆಂದಾಗ ನನ್ನ ಕಣ್ಣಮುಂದೆ ಬರುವುದು ದೇಶ ಕಾಯುವ ಸೈನಿಕರು. ಅದಕ್ಕೆ ಕಾರಣ , 
ಮಾತಾ-ಪಿತರು,ಮಡದಿ-ಮಕ್ಕಳು ,ಅಣ್ಣ-ತಮ್ಮಂದಿರು ,ಅಕ್ಕ-ತಂಗಿಯರು ,ನೆಚ್ಚಿನ ಗೆಳೆಯರ ಬಳಗ ,ಅಚ್ಚುಮೆಚ್ಚಿನ ಅಜ್ಜ-ಅಜ್ಜಿ ,
ಹಬ್ಬ-ಹರಿ ದಿನಗಳ್ಳಲ್ಲಿ  ಒಂದುಗೂಡುವ ನೆಂಟರು ಹೀಗೆ ಎಲ್ಲರನ್ನೂ ಬಿಟ್ಟು ಸಾವಿನ ಹಂಗನ್ನೂ ತೊರೆದು ಚಳಿ, ಮಳೆ, ಬಿಸಿಲು ಎನ್ನದೆ ಹಗಲಿರುಳು ಶ್ರಮಿಸುವ ನಮ್ಮ ಸೈನಿಕರು ಅವರ ಸಮಸ್ತ ಕುಟುಂಬ ಬಳಗವೆಲ್ಲವನ್ನು ಕ್ಷಣಾರ್ಧದಲ್ಲೇ ಸಂಪರ್ಕಿಸಲು ರಹದಾರಿ ಮಾಡಿಕೊಟ್ಟ ಮಾಹಿತಿತಂತ್ರಜ್ಞಾನ ಹಾಗು ಸಾಮಾಜಿಕ ಮಾಧ್ಯಮ ಗಳ ಪಾತ್ರ ಅಪಾರ ಮತ್ತು ಅಭಿನಂದನಾರ್ಹ. 

Comments

Popular posts from this blog

WOMEN

PLACES OF THE DAY

ECONOMY